San Francisco to ಸದಾಶಿವನಗರ


cropped-abhishek-logo

ಬೆಂಗಳೂರು ಬೆಳೆದು ದೊಡ್ಡ ಗಾತ್ರದಲ್ಲಿ ನಮ್ಮ ದೇಶವನ್ನು ಅಕ್ರಮಸಿಕೊಂಡಿತು. ಮೈಸೂರ್ ಮಹಾರಾಜರು ಅಂದಿಗೆ ಕಟ್ಟಿದ ಬೆಂಗಳೂರು ಪ್ಯಾಲೇಸಿನ ಸುತ್ತ ಮುತ್ತ  ಇವತ್ತು ಸದಾಶಿವನಗರ ಎಂದು ಹೆಸರಿಡಲಾಗಿತ್ತು, ‘Real Estate’ ಎತ್ತರಕ್ಕೆ ಬೆಳೆದು ಯಾರಿಗೂ ಸಿಗದೇ ಗಾಜಿನಲ್ಲಿ ಇಟ್ಟ ಬೊಂಬೆಯಾಗಿತ್ತು. ಹಾಳಾಗ್ತಿದ್ದ  ಸ್ಯಾಂಕಿ ಟ್ಯಾಂಕನ್ನು ಹಲವಾರು ಸಂಸ್ಥೆಗಳು ಒಟ್ಟಿಗೆ ಸೇರಿ ಸರಕಾರದ ಜೊತೆ ಕೈ ಜೋಡಿಸಿ ಒಂದು ಸುಂದರವಾದ ಉಪವನವನ್ನಾಗಿ ಮಾಡಿದ್ದು ಒಂದು ದೊಡ್ಡ ರೆವಲ್ಯೂಷನ್!  ಸದಾಶಿವನಗರದ ೭ನೇ ಮೇನ್ ನಲ್ಲಿ ಬಲಕ್ಕೆ ತಿರುಗಿ ೩ ಕ್ರಾಸ್ನಲ್ಲಿ ಅಪರೂಪಕ್ಕೆ ಒಂದು ೬೦-೪೦ ಮನೆ ಖಾಲಿ ಆಗಿತ್ತು, ಬಹುಶಃ ಹಲವಾರು ವರ್ಷಗಳ ಹಿಂದ ಕಟ್ಟಿದ ಈ ಮನೆಯನ್ನು San Francisco ನಲ್ಲಿ ವಾಸವಾಗಿದ್ದ ಗಣೇಶ್ ಮೂರ್ತಿ ಅನ್ನೋರು ಎರಡರಷ್ಟು ಹಣವನ್ನು ಕೊಟ್ಟು ಕೊಂಡಿದ್ದರು!

ಗಣೇಶ್ ಮೂರ್ತಿ ಅಮೆರಿಕಾದ San Franciscoದಲ್ಲಿ ದೊಡ್ಡ ಮಟ್ಟದ ಸಾಫ್ಟ್ವೇರ್ ಕಂಪನಿ ನಡ್ಸ್ತಾ ಇದ್ರು, ಸುಮಾರು ೩೫ ವರ್ಷಗಳ ಕಾಲ ಅಮೇರಿಕಾದಲ್ಲಿ ದುಡಿದು ಗಣೇಶ್ ಬೆಂಗಳೂರಿಗೆ ಹಿಂತಿರುಗಬೇಕು ಎಂಬ ತಮ್ಮ ಕನಸನ್ನು  ನನಸು ಮಾಡಿಕೊಳ್ಳಲು ಸದಾಶಿವನಗರದ ಆ ೪೦-೬೦ ಮನೆಯನ್ನು ಕೊಂಡಿದ್ದರು.

ಗಣೇಶ್ ಗೆ ಇಬ್ಬರು ಮಕ್ಕಳು, ಅಮೆರಿಕಾದ  Santa Clara University ಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು , ಮಕ್ಕಳು ದೊಡ್ಡವರು ಆದರು ಇನ್ನು ತನ್ನ ಜವಾಬ್ದಾರಿ ಮುಗಿತು ಅಂತ ನಿಟ್ಟುಸಿರು ಬಿಟ್ಟು ತನ್ನ ಹೆಂಡತಿ ಪರಿಮಳಾಳ ಮುಖವನ್ನು ಒಮ್ಮೆ ನೋಡಿ ಶಾಂತಿಯಿಂದ ನಕ್ಕು ಬೆಂಗಳೂರಿನ ಕನಸನ್ನು ಕಂಡ ಗಣೇಶ್ ತನ್ನ ೪೦-೬೦ ಮನೆಯನ್ನು ಸಂಪೂರ್ಣವಾಗಿ ರಿಪೇರಿ ಮಾಡಲು ಕಾಂಟ್ರಾಕ್ಟ್ ಒಂದನ್ನು ಕೊಟ್ಟರು.

golden-gate-bridge

“ನಾನು ಖುದ್ದಾಗಿ ಬರೋಕ್ಕೆ ಆಗೋಲ್ಲ, ಹಣದ ಚಿಂತೆ ಇಲ್ಲ ಕೆಲಸ ಅಚ್ಚುಕಟ್ಟಾಗಿ ಆಗ್ಬೇಕು ಅಷ್ಟೆ”

ಅಂತ ಹೇಳಿ ಫೋನ್ ಇಟ್ಟು ಕಂಟ್ರಾಕ್ಟರ್ ಪಳನಿಗೆ ಹಣ ಕಳುಹಿಸಿಕೊಟ್ಟರು.

ಪಳನಿ ಶ್ರೀರಾಂಪುರದಲ್ಲಿ ವಾಸವಾಗಿದ್ದ, ಪಳನಿಗೆ ತಾನು ‘ಸಿವಿಲ್ ಇಂಜಿನಿಯರ್’ ಅಗ್ಲಿಲ್ವಲ್ಲ ಅನ್ನೋ ಕೊರಗು ಇತ್ತು, ತನ್ನ ಮಗ ಸೆಲ್ವಂ ಇಂಜಿನಿಯರ್ ಆಗ್ಲೇಬೇಕು ಅಂತ ಪಣ ತೊಟ್ಟಿದ್ದ, ಸೆಲ್ವಂ ಶ್ರೀರಾಂಪುರದ Railway Bridge ಹತ್ತಿರ ಮಂತ್ರಿ Apartments ಹುಡುಗರಿಗೆ ಬುಗರಿ ಹೇಗೆ ಬಿಡೋದು ಅಂತ ಹೇಳ್ ಕೊಡ್ತಿದ್ದ, ಪ್ರತಿ ಕ್ಲಾಸ್ಗೆ ೧೦ ರೂಪಾಯಿ ತೊಗೋತಿದ್ದ, ಸೆಲ್ವಂ ಅಷ್ಟೇನು ಬುದ್ದಿವಂತನಲ್ಲ, ಈ ಸತ್ಯವನ್ನು ತಿಳಿದಿದ್ದ ಪಳನಿ “Payment Seat”ಆದ್ರೂ ಕೊಡ್ಸ್ಲೇಬೇಕು ಅಂತ ಹಗಲು ರಾತ್ರಿ ಕೆಲಸ ಮಾಡ್ತಿದ್ದ, ರೋಡ್, ಫುಟ್ಪಾತ್, ಮನೆ, ಕಾಂಪ್ಲೆಕ್ಸ್ ಹೀಗೆ ಹಲವಾರು ಕೆಲಸಗಳನ್ನು ಒಟ್ಟಿಗೆ ಒಪ್ಪಿಕೊಂಡು ಕಷ್ಟಪಡುತ್ತಿದ್ದ, ಟಿಂಬರ್ ಯಾರ್ಡ್ Layout ಒಂದ್ರಲ್ಲಿ ಕೆಲಸ ಮಾಡುವಾಗ ಬಂದ ಒಂದು ಫೋನ್ ಅಮೆರಿಕಾದ ಗಣೇಶ್ ಮೂರ್ತಿದು ಆಗಿತ್ತು

“ಕವಲೇನೆ ಬೇಡ ಸಾರ್, ಕೆಲಸ ನಾ ಮುಗಿಸಿಕೊಡ್ತೀನಿ, ಸಣ್ಣ ಪುಟ್ಟ ಕೆಲಸ ತಾನೇ.. ನಾನ್ ನಿಂತು ಕೆಲಸ ಮಾಡಿಸ್ತೀನಿ..”

ಅಂತ ಆಶ್ವಾಸನೆ ಕೊಟ್ಟು ಫೋನ್ ಕಟ್ ಮಾಡಿ, ನಂದಿನಿ ಲೇಔಟ್ ನಲ್ಲಿ ಇದ್ದ ತನ್ನ ಸ್ನೇಹಿತ ಬಾಬುಗೆ ಫೋನ್ ಹಾಕಿ!

“ಲೋ ಬಾಬು, ಕಮ್ಮಿ ಕೆಲಸ ತುಂಬಾ ಕಾಸು! ಸೇಯ್ಥಿರ?”

ಅಂತ ತನ್ನಲಿ ಅಡಗಿದ್ದ ಎಲ್ಲ ಭಾಷೆಯನ್ನು ಮಿಶ್ರಣ ಮಾಡಿ ತನ್ನದೇ ಆದ ಒಂದು ಭಾಷೆಯಲ್ಲಿ ಮಾತಾಡಿ ಬಾಬುವನ್ನು ಸದಾಶಿವನಗರದ ೪೦-೬೦ ಮನೆ ಕೆಲ್ಸಕ್ಕೆ ಒಪ್ಪಿಸಿದ್ದ.

ಬಾಬು, ಸಿನೆಮಾಗೆ ಕಥೆ ಬರಿಬೇಕಂತ ಬೆಂಗಳೂರಿಗೆ ಬಂದಿದ್ದ, ಗಾಂಧಿನಗರದ ಧೂಳು ತಿಂದು ಬಾಬು ತನ್ನ ಹೊಟ್ಟೆಪಾಡಿಗಾಗಿ “Sub Contractor” ಕೆಲ್ಸಕ್ಕೆ ಸೇರ್ಕೊಂಡ, ಕ್ರಮೇಣ ಆ ಕೆಲ್ಸದ ಮಾಲಿಕ ಕೂಡ ಆದ, ಬಾಬು ಹಾಗು ಪಳನಿ ಒಕ್ಳಿಪುರಂನ ಒಂದು ಬಾರ್ನಲ್ಲಿ ಪರಿಚಯಗೊಂಡವರು, ಪಳನಿಗೆ ಬಾಬುವಿನ ಸ್ಥಿತಿ ನೋಡಿ ಒಂದು ಸ್ವಲ್ಪ ದುಃಖವಾಗಿತ್ತು “ಡೈ, ಕಾಸ್ ಮಾಡಿ, ನೀನೆ Picture ತೆಗಿ” ಅನ್ನೋ ಬೋಧನೆಯನ್ನು ಮಾಡಿದ್ದ, ಬಾಬುವಿಗೆ ಆ ಮಾತುಗಳನ್ನು ಕೇಳಿಸ್ಕೊಂಡು ಹೊಸದೊಂದು ಹುಮ್ಮಸು ಹುಟ್ಟಿದಂತಾಗಿತ್ತು, ಬಂದ ಕೆಲ್ಸಗಳನ್ನೆಲ್ಲಾ ಮಾಡಿ, ಹಣ ಸಂಪಾದಿಸಿ ತಾನೇ ಒಂದು ಸಿನೆಮಾನ ನಿರ್ದೇಶನ ಮಾಡ್ಬೇಕು ಅನ್ನೋ ಕನಸು ಚಿಗುರಿತ್ತು.

ಸದಾಶಿವನಗರ ಮನೆ ಕೆಲಸ ಮುಗಿಸ್ಕೊಟ್ರೆ ತಾನು ತನ್ನ ಕನಸಿನ ಮೊದಲನೆಯ ಹೆಜ್ಜೆ ಇಡಬಹುದು ಎಂದು ತಿಳಿದ ಬಾಬು ಪಳನಿಯನ್ನು ಚಾಮರಾಜಪೇಟೆಯ ಹೊಸದೊಂದು ಬಾರ್ನಲ್ಲಿ ಭೇಟಿ ಮಾಡಿ ೪೦-೬೦ ಮನೆಯ ಬೀಗ ತೊಗೊಂಡು ಕೆಲಸವನ್ನು ಶುರು ಮಾಡಲು ಹೊರಟ,

“ಲೋ ಬಾಬು ಪಾತ್… ನಾಳೆ ಒಳ್ಳೆ ದಿನ.. ಶುರು ಹಚ್ಕೋ..” ಅಂತ ಪಳನಿ ಜೋರಾಗಿ ಕಿರುಚಿ “Small cigarette” ಒಂದನ್ನು ಹಚ್ಚಿ ಹೊಸ ಕೆಲಸದ ಹಣವನ್ನು ಪಾಲು ಮಾಡಿದ್ದ.

ಅಮೇರಿಕಾದಲ್ಲಿ ಗಣೇಶ್ ಮೂರ್ತಿ ಅದೇ ಹೊತ್ತಿಗೆ ತನ್ನ ಎಲ್ಲ ಅಮೆರಿಕಾದ ಗೆಳೆಯರನ್ನು ಕರೆದು “Friends, This is our last evening together” ಅಂತ ಜೋರಾಗಿ ಹೇಳಿ ನಕ್ಕು ವಿಸ್ಕಿ ಗ್ಲಾಸ್ ಅನ್ನು ಮೇಲಕ್ಕೆ ಎತ್ತಿದ; ಸ್ನೇಹಿತರು ಗಣೇಶ್ ಗೆ “German Sutta” ಪ್ಯಾಕ್ gift ಮಾಡಿ, ಅವತ್ತೇ ಒಂದು ಹಚ್ಚಲು ಒತ್ತಾಯ ಮಾಡಿದರು, ಗಣೇಶ್ ಆವತ್ತು ತುಂಬಾ ಸಂತೋಷದಿಂದ “sutta” ಹಚ್ಚಿ ಮುಂದಿನ ತಿಂಗಳು ಕೆಲಸ ಮುಗಿದ ಮೇಲೆ ಶಿಫ್ಟ್ ಮಾಡ್ತೀನಿ ಅಂತ ಹೇಳಿದ ಕೊಡಲೇ ಹಿಂದ್ಗಡೆಯಿಂದ ಪರಿಮಳ ಬುಧ್ವಾರಾನೇ ಮಾಡೋಣ ಒಳ್ಳೆ ದಿನ ಅಂತ ಕೂಗಿದಳು!

ಅದೇನೋ ವಿಧಿವಶಾತ್ ಅವತ್ತು ಬೆಂಗಳೂರು ಹಾಗು San Francisco ಎರಡು ಕಡೆ ಜೋರಾಗಿ ಮಳೆ.

“ಸರೀಗೆ ಹಾಕು ಪ್ಲಾಸ್ಟಿಕ್ ನಾ” ಅಂತ ಕಿರುಚಿ ವಿವೇಕ್ ನಗರದಲ್ಲಿ ಗಂಗಮ್ಮ ತನ್ನ ಎರಡನೆಯ ಮಗನ್ನು ಗಾಢವಾದ ನಿದ್ದೆಯಿಂದ ಎಬ್ಬಿಸಿದಳು, ಗಣಿ ತನ್ನ ಕಣ್ಣನು ಒರೆಸಿಕೊಂಡು ಎದ್ದು

“ಪ್ರಾಣ ತಿಂತೀಯಾ.. ಬಿದ್ಗೊಳಕ್ಕೂ ಬಿಡೋಲ್ಲ ಅಂತ ತನ್ನ ಮನಸಿನಲ್ಲಿ ಅಂದುಕೊಂಡು..”

ತನ್ನ ಗುಡಿಸಲನ್ನು ಸರಿಯಾಗಿ ಪ್ಲಾಸ್ಟಿಕ್ ಕವರ್ ಅಲ್ಲಿ ಮುಚ್ಚಲು ಹೊರಡುತ್ತಾನೆ.

“ನೆನಿಬೇಡ್ವೊ ದರ್ಬೇಸಿ! ನಾಳೆಯಿಂದ ಹೊಸ ಕೆಲಸ, ಸದಾಶಿವನಗರಕ್ಕೆ ಹೋಗ್ಬೇಕು”

ಅಂತ ಗಂಗಮ್ಮ ಸಿಡುಕಿದಳು, ರಾತ್ರೆ ಪೂರ್ತಿ ಮಳೆ ಇಂದ ತಪ್ಪಿಸಿಕೊಂಡು ತನ್ನ ಗುಡಿಸಿಲ ಪ್ಲಾಸ್ಟಿಕ್ ಅನ್ನು ಕಾಪಾಡುತ್ತಾ ಬೆಳಗ್ಗೆ ಗಣಿ ಸದಾಶಿವನಗರದ ಮನೆಯ ಗಾರೆ ಕೆಲ್ಸಕ್ಕೆ ಕರಣಿ ಒಂದನ್ನು ಹಿಡಿದು ಹೋರಾಡಲು ನಿಂತನು, “ಒಳ್ಳೇದಾಗ್ಲಿ ಮನೆ ಪಸಂದಾಗ್ ಕಟ್ಟು” ಅಂತ ಹಾರೈಸಿ ಗಣಿಗೆ ತನ್ನ ಶೈಲಿಯಲ್ಲಿ “All the Best” ಹೇಳಿದ್ಲು. ಅಷ್ಟ್ರಲ್ಲಿ ಬಾಬು ತನ್ನ ಮಾರುತಿ ವ್ಯಾನ್ ಒಂದನ್ನು ಓಡಿಸಿಕೊಂಡು ಗಣಿಯ ಗುಡಿಸಲು ಮುಂದೆ ಬಾನು ನಿಲ್ಲಿಸಿ

“ಹತ್ತೋ Time ಆಯ್ತು” ಅಂತ ಗದರಿದ

“ನೋಡ್ಕೊಂಡು ಸಾಮಿ, ಚಿಕ್ಕವನು..” ಅಂತ ಹೇಳಿ ಗಂಗಮ್ಮ ಸಂಧಾನ ಮಾಡುದ್ಲು

ಬಾಬುವಿಗೆ ಗಾಂಧಿನಗರದಲ್ಲಿ ೧೧ ಗಂಟೆಗೆ ಒಂದು “Script Discussion” ಇತ್ತು, ಆತುರದಲ್ಲಿ ಗಣಿಯನ್ನು ಹತ್ತಿಸಿಕೊಂಡು ಏನೂ ಮಾತಾಡದೆ ಸದಾಶಿವನಗರದ ೪೦-೬೦ ಮನೆ ಹತ್ತಿರ ಬಂದು ಇಳಿಸಿ

“ನೋಡೋ ಗಣಿ ಅಲ್ಲಿ ಇರೋ ಎಲ್ಲ ಗಾರೆಯನ್ನ ಕೆತ್ತು, ಹೊಸ cement ಬರುತ್ತೆ, ನಾಳೆ ಇಬ್ಬರು ಬರ್ತಾರೆ” ಅಂತ ಕೆಲಸ ಒಪ್ಪಿಸಿ ಗಾಂಧಿನಗರದ ಕಡೆಗೆ ಹೊರಟ. ಗಣಿ ಆಶ್ಚರ್ಯದಲ್ಲಿ ಮನೆಯೊಳಗೆ ಕಾಲಿಟ್ಟು “ಹುಷಪ್ಪ! ಅಂತ ನಿಟ್ಟು ಉಸಿರು ಬಿಟ್ಟು ತನ್ನ ಜೀವನದಲ್ಲೇ ತಾನು ಇಷ್ಟು ದೊಡ್ಡ ಮನೆಯನ್ನು ನೋಡಿರ್ಲಿಲ್ಲ ಅನ್ನೋ ಸತ್ಯವನ್ನು ತನ್ನಲ್ಲಿ ತಾನು ಅರಗಿಸಿಕೊಳುತ್ತಾನೆ.

ಪಳನಿ ಟಿಂಬರ್ ಯಾರ್ಡ್ ಲೇಔಟ್ ನಲ್ಲಿ ಇನ್ನೂ ಒಂದು ಮಹಡಿ ಕಟ್ಟಬೇಕೆಂದು ತಿಳಿದು ತಾನು  ಇನ್ನೂ ಹೆಚ್ಚು ಸಂಪಾದನೆ ಮಾಡಬಹುದು ಎಂದು ತಿಳಿದು Calculator ಹಿಡಿದು ಕೂರುತ್ತಾನೆ. ಆ ಕಡೆ ಅಮೇರಿಕಾದಲ್ಲಿ ಗಣೇಶರವರ ಮನೆ ಮುಂದೆ Fed-Exನ ಲಾರಿಯೊಂದು ಬಂದು ನಿಲ್ಲುತ್ತದೆ.

“Load Everything as careful as possible” ಅಂತ ಹೇಳಿ ಗಣೇಶ್ ತನ್ನ ಆಫೀಸ್ ಕೆಲಸ್ದಲ್ಲಿ ಮಗ್ನರಾಗುತ್ತಾರೆ.

ದಿನಗಳು ಕಳೆಯುತ್ತವೆ, ಗಣೇಶ್ Indiaಗೆ ವಾಪಸ್ಸು ಬರೋ ದಿನಗಳು ಹತ್ತಿರ ಬರುತ್ತದೆ, ಒಮ್ಮೆ ಪಳನಿಗೆ ಫೋನ್ ಮಾಡಿ ಕೆಲಸದ ಬಗ್ಗೆ ವಿಚಾರಿಸಲು ನಿರ್ಧಾರ ಮಾಡುತ್ತಾರೆ

“Hello! ಸಾರ್ ಸೊಲ್ಲು… ಕೇಕರ್ದ?” ಅಂತ ಪಳನಿ ಗಾಬರಿಯಿಂದ ಟಿಂಬರ್ ಯಾರ್ಡ್ ಲೇಔಟ್ನಿಂದ ಆಚೆ ಬಂದು ತನ್ನ ಕೆಂಪು ಕರ್ಚೀಫ್ನಲ್ಲಿ ಬೆವರನ್ನು ಒರೆಸಿಕೊಳುತ್ತಾನೆ.

“ಕಾರ್ಯ ಎಲ್ಲ ಸೂಪರ್ ಸಾರ್” ಅಂತ ದಿಟ್ಟವಾಗಿ ಹೇಳೋ ಮುಂಚೆ ತಾನು ಸಮಜಾಯಿಸಿ ಕೊಡುತ್ತಾನೆ, ತನ್ನ ಇನ್ನೊಂದು ಫೋನ್ ನಲ್ಲಿ ಬಾಬು ಗೆ ಫೋನ್ ಮಾಡುತ್ತಾನೆ “ನಿಮ್ಮದು ಊಟ ಎಲ್ಲ ಆಯ್ತಾ ಸಾರ್” ಅಂತ ಮಾತನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗುತ್ತಾನೆ..

“ಊಟ ಆಯ್ತಪ್ಪ ಇನ್ನು ಅಲ್ಲಿಗೆ ಬರೋ ದಿನಗಳು ಹತ್ತಿರ ಬಂದ್ವು, ಇನ್ನು ಒಂದೇ ವಾರ ಇರೋದು ಮನೆ ಕೆಲಸ ಹೇಗ್ ನಡಿತಾ ಇದೆ ಫೋಟೋ ಕಳ್ಸ್ತೀನಿ ಅಂದಿದ್ದೆ.. ಏನು ಬಂದಾಗಿಲ್ಲ ” ಅಂತ ಗಣೇಶ್ ತಮ್ಮ ಮೃದುವಾದ ಧ್ವನಿಯಲ್ಲಿ ಮಾತಾಡಿದ್ದು ಪಳನಿ ಗೆ ಆತಂಕ ಉಂಟು ಮಾಡ್ತಿತ್ತು, ಇನ್ನು ಒಂದೇ ವಾರದಲ್ಲಿ ಅವ್ರು ಬರೋ ಸುದ್ದಿ ಕೇಳಿ ಬೆವರು ಇಳೀತು ಅಷ್ಟ್ರಲ್ಲಿ ಬಾಬುಗೆ ಮಾಡಿದ ಫೋನ್ connect ಆಗಿತ್ತು

“ಮಚ್ಚ! ಏನಾಯ್ತು ಕೆಲಸ ಸಾರ್ next week comingಉ..” ಅಂತ ಪಿಸು ಗುಟ್ಟಿದ

ಗಾಂಧಿನಗರ ಹೋಟೆಲ್ ರೂಮ್ ನಲ್ಲಿ producer ಜೊತೆ ಕೂತಿದ್ದ ಬಾಬು.. ತನ್ನ ಇನ್ನೊಂದು ಫೋನ್ ನಿಂದ ಗಣಿಗೆ call ಮಾಡಿದ್ದ..

Cement ಕಲಸ್ತಿದ್ದ ಗಣಿ ಫೋನ್ attend ಮಾಡ್ಲಿಲ್ಲ, ಬಾಬು ಪಳನಿಗೆ “ಚಿಂತೆ ಬೇಡ ಕೆಲಸ ಮುಗಿತು ಅಂದ್ಕೊ ಅನ್ನೋ ಆಶ್ವಾಸನೆ ಕೊಟ್ಟ” ಪಳನಿ “ಕವಲೆ ಬೇಡಾ ಸಾರ್, ಕೆಲಸ ಮುಗಿತು ಅಂದ್ಕೊಳಿ” ಅಂತ ಮತ್ತೊಮ್ಮೆ ಆಶ್ವಾಸನೆ ಕೊಟ್ಟ, ಗಣೇಶ್ ತನ್ನ ಮೇಜಿನ ಮೇಲೆ ಇದ್ದ globe ಒಂದನ್ನು ತಿರುಗಿಸಿ ಭಾರತ ಬಂದಾಗ ನಿಲ್ಲಿಸಿದರು, ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತು.

ಮಾರ್ನೆ ದಿನ ಇನ್ನು ೪ ದಿನಗಳು ಇರ್ಬೇಕಾದ್ರೆ ಪಳನಿ ಸದಾಶಿವನಗರದ ೪೦-೬೦ ಮನೆಗೆ ಹೋದ, ಕೆಲಸ ಅರ್ಧಕ್ಕೂ ಮುಗ್ದಿರ್ಲಿಲ್ಲ, ಪಳನಿ ಸಿಟ್ಟು ಮಾಡಿಕೊಂಡು ಬಾಬುವಿಗೆ ತರ ಮರ ತರಾಟೆಗೆ ತೊಗೊಂಡು ಗಣಿಯನ್ನ ಕಿತ್ತುಹಾಕಿ ಬೇರೆಯವರಿಗೆ ಕೆಲಸ ಕೊಡಬೇಕೆಂದು ಆದೇಶಿಸಿದ. ಪಳನಿ ಹತ್ರ ಕೆಟ್ಟ ಭಾಷೆಯಲ್ಲಿ ಬೈಸ್ಕೊಂಡ ಬಾಬು ತನ್ನ ಸಿಟ್ಟನ್ನೆಲ್ಲ ಗಣಿಯ ಮೇಲೆ ತೋರಿಸಿದ, ಅಲ್ಲೇ ಇದ್ದ ಮರದ ತುಂಡನ್ನು ತೊಗೊಂಡು ಬರೆ ಬರೋ ಹಾಗೆ ಗಣಿಗೆ ಹೊಡೆದು ಮನೆಯಿಂದ ಆಚೆ ದೂಡಿದನು. ಗಣಿಗೆ ಒಂದು ಮಾತನ್ನು ಆಡಲು ಸಮಯ ಕೊಡಲಿಲ್ಲ, ಗಣಿ ಅವತ್ತು ಜೋರಾಗಿ ಸದಾಶಿವನಗರದ ಮನೆ ಆಚೆ ನಿಂತು ಅತ್ತನು, ಅವನ ಕಣ್ಣಲ್ಲಿ ನೋವು ಕಾಣುತ್ತಿತ್ತು, ಅತ್ತು ಅತ್ತು ಗಣಿಯ ಗಂಟಲು ಒಣಗಿ ಹೋಗಿದ್ವು, ಗಣಿ ಒಂದು ಚೂರು ಮಾತನಾಡದೆ ಮನೆಯ ಎದುರು ಹಾಗೆ ನಿಂತ.

ಅಲ್ಲಿ ಆ ಕಡೆ ಗಣೇಶ್ ಸ್ನೇಹಿತರು ಗಣೇಶ್ ವಾಪಸ್ಸು ಹೋಗ್ತಿರೋದನ್ನು ಕಂಡು ಜೋರಾಗಿ ತಬ್ಬಿಕೊಂಡು “We miss you” ಅಂತ ಅತ್ತರು, ಪರಿಮಳ ತನ್ನ ಅಮೆರಿಕಾದ ಮನೆಯನ್ನು ಒಮ್ಮೆ ಹೊರಗಡೆಯಿಂದ ನೋಡಿ ಗಣೇಶ್ರನ್ನು ಅಪ್ಪಿಕೊಂಡು ಮನೆಯ ಎದುರು ಹಾಗೆ ನಿಂತಳು.

ಮತ್ತೊಂದು ಕಡೆ ಬಾಬು ಗಾಂಧಿನಗರದ Producer office ಮುಂದೆ ನಿಂತು ಎಲ್ಲಿ ಪಳನಿ ಕೊಟ್ಟಿದ್ ದುಡ್ಡು ವಾಪಸ್ಸು ಕೊಡ್ಬೇಕಾಗುತ್ತೊ ಅಂತ ಯೋಚ್ನೆ ಮಾಡುತ್ತ ನಿಂತ.

ಚಾಮರಾಜಪೇಟೆ ಬಾರ್ನಲ್ಲಿ ಪಳನಿ ತನ್ನ ಮಗನ 2nd PUC Application Form ಹಿಡಿದು ಜೋರಾಗಿ ಒಮ್ಮೆ ಕೂಗಿದ, ಬಾರ್ನಲ್ಲಿ ಇದ್ದ ಎಲ್ಲರೂ ಗಾಬರಿಯಿಂದ ನಿಂತರು.

ಒಂದು ಕಡೆ ನೋವು ಒಂದು ಕಡೆ ದುಃಖ ಮತ್ತೊಂದು ಕಡೆ ಅಸಮಧಾನ ಹಾಗು ನಿರಾಶೆ! ಅವತ್ತು ಆಕಾಶ ಯಾಕೋ ಕಾರ್ಮೋಡಗಳಿಂದ ತುಂಬಿದ್ವು.

ಮಾರ್ಚ್ ೨, ಗಣೇಶ್ ಹಾಗು ಪರಿಮಳ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಸದಾಶಿವನಗರದ ತಮ್ಮ ೬೦-೪೦ ಮನೆಗೆ ಬಂದು ಇಳಿದರು, ಆಚೆ ಪಳನಿ ಹೊಸದೊಂದು half White ಶರ್ಟ್ ಹಾಕೊಂಡು ಕೈಯಲ್ಲಿ ಮಾಲೆಯೊಂದನ್ನು ಹಿಡಿದು ನಿಂತಿದ್ದ. “Welcome ಸಾರ್” ಅನಂತ ಜೋರಾಗಿ ಕೂಗಿ ಗಾಬರಿಯಲ್ಲಿ ಮಾಲೆಯನ್ನು ಪರಿಮಳ ಗೆ ಹಾಕಲು ಹೊರಟ್ಟಿದ! “Thank you ಪಳನಿ” ಅಂತ ಪಳನಿಯ ದಿಕ್ಕನ್ನು ಗಣೇಶ್ ತಾವೇ manage ಮಾಡಿಕೊಂಡರು.

“ಸಾರೀ ಸಾರ್ full ಖುಷಿ..” ಅಂತ ಹೇಳಿ ಪಳನಿ ತನ್ನ ೩೨ ಹಲ್ಲುಗಳನ್ನು ಪ್ರದರ್ಶಿಸಿದ, “ಇದ್ ಬಾಬು.. ನನ್ Friend ಒಳ್ಳೆ ಕೆಲಸಗಾರ..” ಅಂತ ಹೇಳಿ ಬಾಬುವನ್ನು ಪರಿಚಯಿಸಿದ, ಬಾಬು “ಸರ್ sweets ತೊಗೋಳಿ..” ಅಂತ ತನ್ನ ಕೈಯಲ್ಲಿ ಇದ್ದ sweet box ಅನ್ನು ಮುಂದೆ ಇಟ್ಟ.

“ಆಗ್ಲಿ ಮೊದಲು ಪೂಜೆ ” ಅಂತ ಹೇಳಿ ಗಣೇಶ್ ಹಾಗು ಪರಿಮಳ ಮನೆಗೆ ತಮ್ಮ ಬಲಗಾಲ್ ಇಟ್ಟು ಒಳಗೆ ಹೋಗಬೇಕು ಅಷ್ಟ್ರಲ್ಲಿ ದೂರದಲ್ಲಿ ನಿಂತು ಮನೆಯನ್ನೇ ಗುರಾಯಿಸಿ ನೋಡುತ್ತಿದ್ದ ಗಣಿಯನ್ನು ಗಣೇಶ್ ನೋಡಿ “ಯಾರದು?” ಅಂತ ಪಳನಿಗೆ ಪ್ರಶ್ನಿಸಿದ್ದರು. ಪಳನಿ ಬಾಬುವಿಗೆ ಕಣ್ ಸನ್ನೆ ಮಾಡಿ..  “ಸಾರ್ ಯಾರೋ ಭಿಕ್ಷುಕ ನೀವ್ ಒಳಗೆ ಹೋಗಿ time ಆಯ್ತು ” ಅಂತ ಹೇಳಿ ಗಣೇಶ್ರನ್ನು ಒಳಗೆ ದಬ್ಬುತ್ತಾನೆ. ಬಾಬು ಅಲ್ಲೇ ಪಕ್ಕದಲ್ಲಿ ಇರೋ ಕೋಲೊಂದನ್ನು ತೊಗೊಂಡು ಗಣಿಗೆ ಹೊಡೆಯಲು ಹೋಗ್ತಾನೆ ಅಷ್ಟ್ರಲ್ಲಿ ಪರಿಮಳ ಕಿಟಕಿಯಿಂದ  “ಹೊಡಿಬೇಡಪ್ಪ Please ಪೂಜೆ ಆದ್ಮೇಲೆ ಅವನಿಗೂ ಊಟ ಹಾಕೋಣ” ಅಂತ ಹೇಳಿ ಒಳಗೆ ಹೋಗುತ್ತಾಳೆ.

“ಬದುಕೊಂಡೆ.. ಯಾಕ್ ಬಂದೆ ದರ್ಬೇಸಿ ?” ಅಂತ ಬಾಬು ಗದರಿದ. ಪೂಜೆ ಮುಗಿದು ಸಾಯಂಕಾಲ ಆಗಿತ್ತು, ಸುಸ್ತಾಗಿ ಗಣೇಶ್ ಹಾಗು ಪರಿಮಳ ಎಲ್ಲರಿಗೂ ತಾಂಬೂಲ ಕೊಟ್ಟು ಪಳನಿಯನ್ನು ಕರೆದು ಬೆಳ್ಳಿ ತಟ್ಟೆಯಲ್ಲಿ ಒಂದಷ್ಟು ಹೆಚ್ಚಿಗೆ ಹಣವನ್ನು ಇಟ್ಟು “ತುಂಬಾ Thanks ಪಳನಿ ತಾವೇ ಖುದ್ದಾಗಿ ನಿಂತು ಇಷ್ಟು ಚೆನ್ನಾಗಿ ಕೆಲಸ ಸಮಯಕ್ಕೆ ಮುಗಿಸಿ ಕೊಟ್ಟಿದ್ದಕ್ಕೆ” ಅಂತ ಹೇಳಿ ಕೈ ಮಿಲಾಯಿಸಿ ತಮ್ಮ ಸಂತೋಷವನ್ನು ಹಂಚಿಕೊಂಡರು.

ಪರಿಮಳ ಅಷ್ಟ್ರಲ್ಲಿ ಉಳಿದಿದ್ದ ಊಟವನ್ನು ಹೊರಗಡೆ ನಿಂತ ಭಿಕ್ಷುಕನಿಗೆ ಕೊಡಲು ಹೊರಡುತ್ತಾಳೆ, “ಚಪ್ಲಿ ಹಾಕೊಂಡು ಹೋಗು” ಅಂತ ಗಣೇಶ್ ಕೂಗುತ್ತಾರೆ, ಪರಿಮಳ ಹೊರಗಡೆ ಹೋಗಿ ಆ ಭಿಕ್ಷುಕನನ್ನು ಹುಡುಕುತ್ತ ನಿಲ್ಲುತ್ತಾಳೆ ಅಷ್ಟ್ರಲ್ಲಿ ಬಾಬು ಬಂದು “ಬನ್ನಿ Madam ನಮ ದೇಶದಲ್ಲಿ ಭಿಕ್ಷುಕರು ಕಮ್ಮಿ ಇಲ್ಲ! ಅಂತ ಹೇಳಿ ಅವಳ ಕೈಯಲ್ಲಿ ಇದ್ದ ತಟ್ಟೆಯನ್ನು ಕೆಳಗೆ ಇಡಿಸಿ ಒಳಗೆ ಕರಕೊಂಡು ಹೋಗುತ್ತಾನೆ. “ನಾನು ಬರ್ತೀನಿ ಸಾರ್” ಅನಂತ ಹೇಳಿ ಪಳನಿ ತನ್ನ ಗಾಡಿಯನ್ನು start ಮಾಡುತ್ತಾನೆ, ಬಾಬುವಿಗೆ ಚಾಮರಾಜಪೇಟೆಯಲ್ಲಿ ಸಿಗೋಣ ಅಂತ ಹೇಳಿ ಸಂತೋಷದಿಂದ ಹೊರಡುತ್ತಾನೆ.

ರಾತ್ರೆ ಗಂಟೆ ೮, ಗಣೇಶ್ ಹಾಗು ಪರಿಮಳ ತಮ್ಮ ಹೊಸ ಮನೆಯ ಅಂದವನ್ನು ಸವಿಯಲು ಹೊರಗಡೆ ಬರುತ್ತಾರೆ ಅಂದು ಬೆಳದಿಂಗಳ ರಾತ್ರಿ

ಪಳನಿ ಹಾಗು ಬಾಬು ಬಾರ್ ನಲ್ಲಿ ಕೂತು “ತೊಗೊಳೋ ಬಾಬು.. ಸದ್ಯ ಆ ಗಾಂಡು ನನ್ ಮಗನ್ನ ಓಡ್ಸಿದ್ದಕ್ಕೆ ಕೆಲಸ ಆಯಿತು ನೋಡಾಡ್ಯ.. ” ಅನಂತ ಹೇಳಿ ಗ್ಲಾಸ್ನಲ್ಲಿ ವಿಸ್ಕಿಯನ್ನು ಬಗ್ಗಿಸಿಕೊಂಡು ಹಣದ ಒಂದು ಕಂತೆಯನ್ನು ಕೊಡುತ್ತಾನೆ ಬಾಬುವಿಗೆ ಅಷ್ಟ್ರಲ್ಲಿ ಒಂದು SMS ಬರುತ್ತೆ, Small Cigarette ಒಂದನ್ನು ಹಚ್ಚಿ ಏನದು ಅಂತ ನೋಡಿದ ಕೂಡಲೇ ಬಾಬುವಿಗೆ ಮೈಯಲ್ಲ ಝಂ ಅನ್ನುತ್ತದೆ.

“ಏನ್ ಆಚಿ?” ಅಂತ ಪಳನಿ ಕೇಳಿದ ಕೂಡಲೇ ಬಾಬು ಗ್ಲಾಸ್ನಲ್ಲಿ ಇದ್ದ ಅಷ್ಟು ಎಣ್ಣೆ ಕುಡಿದು “ನನ್ನ ಕಥೆಗೆ Producer ಹೂ ಅಂದ್ರು” ಅಂತ ಹೇಳಿ.. ಮತ್ತೊಂದು ಸರಿ ಎಣ್ಣೆ ಹಾಕುತ್ತಾನೆ. ಸಂತೋಷ ತಡಿಯೊಕ್ಕಾಗದೆ ಬಾಬು ಪಳನಿಯನ್ನು ಅಪ್ಪಿಕೊಂಡು “Thank you” ಅನ್ನುತ್ತಾನೆ ಪಳನಿ ಕಣ್ಣಲಿ ನೀರು ಇಳಿಯುತ್ತದೆ.

“ಹೋಗೋ ನೀನು ಈಗ್ಲೇ ಪ್ರೊಡ್ಯೂಸರ್ ಭೇಟಿ ಮಾಡು”

ಅಂತ ಹೇಳಿ ಬಾಬುವನ್ನು ಕಳುಹಿಸಿಕೊಡುತ್ತಾನೆ, ಬಾಬು ಖುಷಿಯಲ್ಲಿ ಹಣದ ಕಂತನ್ನು ಪಳನಿಗೆ ತನ್ನನ್ನು ಸಾಕಿದ್ದಕ್ಕೆ ಗುರು ದಕ್ಷಿಣೆಯಾಗಿ ಕೊಟ್ಟು ಕೈ ಮುಗಿದು ಹೊರಡುತ್ತಾನೆ. ಪಳನಿ ಎದ್ದು Toilet ಗೆ ಹೋಗುತ್ತಾನೆ ಆಗ ಅವ್ನಿಗೆ ಮನೆಯಿಂದ ಫೋನ್ ಬರುತ್ತೆ.

“ರೀ ಸೆಲ್ವಂಗೆ RV college ನಲ್ಲಿ COMED-Kನಲ್ಲಿ ಮೆರಿಟ್ ಸೀಟ್ ಸಿಕ್ತು”

ಅನ್ನೋ ಮಾತನ್ನು ಕೇಳಿಸಿಕೊಂಡು ಪಳನಿ ಫೋನ್ ಅನ್ನು ಉತ್ಸಾಹದಲ್ಲಿ Toiletನಲ್ಲೆ ಬೀಳಿಸುತ್ತಾನೆ, “ಹೋದ್ರೆ ಹೋಗ್ಲಿ” ಅನ್ನೋ ಭಾವನೆಯಲ್ಲಿ ನಂಬಲಾಗದ ಸತ್ಯವನ್ನು ತಿಳಿದು ೧೦೦ ರೂಪಾಯಿ ಹೆಚ್ಚು Tips ಇಟ್ಟು,”Phone ಇಟ್ಕೋ” ಅಂತ ಹೇಳಿ   ಪಕ್ಕ್ದಲ್ಲಿ ಇರೋ ಸಿಹಿ ಅಂಗಡಿಗೆ ಓಡುತ್ತಾನೆ.

ಗಣೇಶ್ ಹಾಗು ಪರಿಮಳ ಇನ್ನೇನು ಮನೆಯೊಳಗೆ ಹೋಗಬೇಕು, ಅಷ್ಟ್ರಲ್ಲಿ ಗಣಿ ಭೂತದ ತರ ಅವರ ಮುಂದೆ ಬರುತ್ತಾನೆ, ಗಾಬರಿಯಾದ ಗಣೇಶ್ ಪರಿಮಳಳನ್ನು ಒಳಗೆ ಕಳುಹಿಸಿ ತನ್ನ ಫೋನಿಂದ ಪೋಲಿಸರಿಗೆ call ಮಾಡುತ್ತಾನೆ, ಗಣಿ ಏನೋ ಹೇಳಲು ಪ್ರಯತ್ನ ಪಡುತ್ತಿರುತ್ತಾನೆ ಪಕ್ಕದ ಬಂಗ್ಲೆಯ Security Guard ಇಬ್ಬರು ಬಂದು ಗಣಿಯನ್ನು ಹಿಡಿದು ಗಣೇಶ್ರನ್ನು ಒಳಗೆ ಕಳುಹಿಸುತ್ತಾರೆ, ಸದಾಶಿವನಗರದ ಬೀದಿಯ ಎಲ್ಲರೂ ಮನೆಯಿಂದ ಆಚೆ ಇಣುಕಿ ತಮ್ಮ Security Guard” ಗಳಗೆ “ನೋಡಿಕೊಂಡು ಬಾ” ಎಂದು ಆದೇಶಿಸುತ್ತಾರೆ, ಅಷ್ಟ್ರಲ್ಲಿ ಅಲ್ಲೇ ಪಕ್ಕದಲ್ಲಿ ಇರೋ ಪೊಲೀಸರು ಬಂದು ಗಣಿಯನ್ನು ಏನೂ ಕೇಳದೆ ತಮ್ಮ car ನಲ್ಲಿ ಕೂರಿಸಿಕೊಂಡು “ನೀವು ಆಮೇಲೆ station ಬಂದು Complaint ಕೊಡಿ” ಅಂತ ಹೇಳಿ ಹೊರಡುತ್ತಾರೆ.

Station ನಲ್ಲಿ, ಗಣಿ ತನ್ನ ಕೈಯಲಿ ಚೀಟಿಯೊಂದನ್ನು ಇಟ್ಟುಕೊಂಡಿರುವುದನ್ನು ನೋಡಿ ಪೊಲೀಸರು ಗಮನಿಸಿ ಅದನ್ನು ಕಿತ್ತುಕೊಂಡು ಓದುತ್ತಾರೆ, ಚೀಟಿಯಲ್ಲಿ ಗಣಿ

“ನಾನು ಮೂಗ ಆದ್ರೆ ನಿಮ್ಮ ಮನೆಯ ತಾರಸಿ ಬಲವಾಗಿಲ್ಲ ಯಾವಾಗಾದ್ರೂ ಬೀಳಬಹುದು..”

ಅಂತ ಓದಿ ಮುಗಿಸೋ ಅಷ್ಟ್ರಲ್ಲಿ ಸದಾಶಿವನಗರದ ೪೦-೬೦ ಮನೆಯಿಂದ station ಗೆ ಫೋನ್ ಕಾಲ್ ಒಂದು ಬರುತ್ತದೆ.

ಬಾಬು ಸಿನಿಮಾದ ಪ್ರೊಡಕ್ಷನ್ ಜೊತೆ agreement Sign ಮಾಡುತ್ತಾನೆ

ಪಳನಿ ತನ್ನ ಮಗನನ್ನು ಕರೆದುಕೊಂಡು ಅವತ್ತು ಮಲ್ಲೇಶ್ವರಂನ ದೊಡ್ಡದಾದ ಹೋಟೆಲ್ ಗೆ ಹೋಗುವನು

ಗಂಗಮ್ಮ ತನ್ನ ಮಗನಿಗಾಗಿ ಗುಡಿಸಿಲ ಆಚೆ ಕಾಯ್ತಾ ಕೂರುವಳು

ಅವತ್ತಿನ ರಾತ್ರಿ ಬೆಳದಿಂಗಳ ರಾತ್ರಿ!

-ಅಭಿಷೇಕ್ ಅಯ್ಯಂಗಾರ್ 

One Comment Add yours

  1. Asmitha says:

    Amazing ending! Reader at emotional amalgamation! Awesome one….

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s